ಗೊಬ್ಬರದ ಅನಿಲಸ್ಥಾವರ

	ಸೆಗಣಿ, ಮಲ, ಮೂತ್ರ, ಮೃತ ಪ್ರಾಣಿಗಳ ಮಾಂಸ, ಕೃಷಿಯಿಂದ ದೊರೆಯುವ ಅನುಪಯುಕ್ತ ವಸ್ತುಗಳು ಇವೇ ಮುಂತಾದವನ್ನು ಉಪಯೋಗಿಸಿಕೊಂಡು ಅನಿಲೇಂಧನವನ್ನು ಉತ್ಪನ್ನ ಮಾಡುವ ಸಾಧನ (ಮೆನ್ಯೂರ್ ಗ್ಯಾಸ್ ಪ್ಲಾಂಟ್; ಕೌಡಂಗ್ ಗ್ಯಾಸ್ ಪ್ಲಾಂಟ್). ಇದರಲ್ಲಿ ಉಪೋತ್ಪನ್ನವಾಗಿ ಉತ್ತಮ ದರ್ಜೆಯ ಗೊಬ್ಬರ ಲಭಿಸುತ್ತದೆ. ಈ ಸ್ಥಾವರದ (ಪ್ಲಾಂಟ್) ಹಿನ್ನಲೆಯ ತತ್ತ್ವವಿಷ್ಟು : ಸೆಗಣಿ, ಗಂಜಲ, ಕೊಳೆಯ ಬಲ್ಲ ಇತರ ಪದಾರ್ಥಗಳ ಚಿಕ್ಕ ತುಣುಕುಗಳು ಇವೆಲ್ಲವನ್ನೂ ಮಡ್ಡಿಯಂಥ (ಸ್ಲರ್ರಿ), ತೀರ ಮಂದವೂ ಅಲ್ಲದೆ ತೀರ ತೆಳುವೂ ಅಲ್ಲದ (ಸಾಧಾರಣವಾಗಿ 1 ಟಿನ್ ಸೆಗಣಿಗೆ 1 ಟಿನ್ ನೀರು ಸೇರಿಸಿ). ಮಿಶ್ರಣ ಮಾಡಿ ದೊಡ್ಡದಾದ ಬಾವಿಯಲ್ಲಿ ಸಂಗ್ರಹಿಸಿದಾಗ ಅದು ಕೊಳೆಯತೊಡಗುತ್ತದೆ; ಈ ಪ್ರಕ್ರಿಯೆಯಲ್ಲಿ ಅದರಿಂದ ಮೀಥೇನ್ ಅನಿಲ ಹೊರ ಹೊಮ್ಮುತ್ತದೆ. ಇದೇ ಗೊಬ್ಬರದ ಅನಿಲ. ಇದನ್ನು ಸಮರ್ಪಕವಾಗಿ ಸಂಗ್ರಹಿಸಿ, ದಾಸ್ತಾನಿಸಿ, ಬೇಕಾದಾಗ ಅಡುಗೆಗೆ ಉರುವಲಾಗಿ ಉಪಯೋಗಿಸಿಕೊಳ್ಳಬಹುದು.

	 ಚಿತ್ರದಲ್ಲಿ ಈ ಸ್ಥಾವರದ ರೇಖಾಚಿತ್ರವನ್ನು ಕೊಟ್ಟಿದೆ. ಇದರ ಭಾಗಗಳ ವಿವರಗಳು ಹೀಗಿವೆ: ಂ ಮಡ್ಡಿ ಮಿಶ್ರಣ ಮಾಡುವ ತೊಟ್ಟಿ. ಃ ಇದರ ತಳದಲ್ಲಿರುವ ತೆರೆಕವಾಟ.  ಇದರ ಮೂಲಕ ಸಾಗಿದ ಃಅಆ ಕೊಳವೆ ಆ ಎಂಬಲ್ಲಿ ತೆರೆದಿರುವುದು. ಇಯು 8' ವ್ಯಾಸ 16' ಆಳ ಇರುವ ಒಂದು ಸಿಮೆಂಟ್ ಕಾಂಕ್ರೀಟ್ ಬಾವಿ. ಇದರ ಹೆಸರು ಪಾಚಕ (ಡೈಜೆಸ್ಟರ್). ಈಉ ಮಟ್ಟದಲ್ಲಿ, ಪಾಚಕದೊಳಗೆ, ಸುತ್ತಲೂ 10' ಅಗಲದ ಒಂದು ಚಡಿ ಉಂಟು. ಊ ಎನ್ನುವ ಭಾಗವನ್ನು ಹೆಸರು ಅನಿಲಧಾರಕ (ಗ್ಯಾಸ್ ಟ್ಯಾಂಕ್). 71/2 ವ್ಯಾಸ 4' ಎತ್ತರವಿರುವ ಲೋಹನಿರ್ಮಿತ (ಸಾಧಾರಣವಾಗಿ ಕಬ್ಬಿಣದ ಹಾಳೆ) ಪೀಪಾಯಿಯಿದು. ಇದರ ಮೇಲು ಭಾಗ ಪೂರ್ಣ ಮುಚ್ಚಿದೆ; ಕೆಳಭಾಗ ತೆರೆದಿದೆ. ಕವುಚಿ ಹಾಕಿದ ತಪ್ಪಲೆಯಂತಿರುವ ಈ ಪೀಪಾಯಿಯ ಶಿಖರದಲ್ಲಿ Iಎ ಎನ್ನುವ ಕೊಳವೆಯನ್ನು ಬೆಸುಗೆ ಹಾಕಿದೆ. ಅನಿಲಧಾರಕ (ಊ) Iಎ ಕೊಳವೆಯ ನೇರ ಮೇಲೆ ಕೆಳಗೆ ಚಲಿಸಬಲ್ಲುದು; ಆದರೆ ಈಉ ಚಡಿಗಿಂತ ಕೆಳಗೆ ಸರಿಯಲಾರದು. ಏಐಒ ಎಂಬುದು ಅನಿಲಧಾರಕ ಮೇಲುಮೈಗೆ ಜೋಡಿಸಿದ ಅನಿಲ ಸಾಗಣೆ ಕೊಳವೆ. ಐ ಎಮಬಲ್ಲಿರುವ ತಿರುಗಣಿಯನ್ನು ಸೂಕ್ತವಾಗಿ ತಿರುಗಿಸಿ ಧಾರಕದಲ್ಲಿ (ಊ) ಸಂಗೃಹೀತವಾದ ಅನಿಲವನ್ನು ಉಪಯೋಗಕ್ಕೆ ಹಾಳತವಾಗಿ ಪಡೆಯಬಹುದು. ಒ ನಿಂದ ಮುಂದಕ್ಕೆ ಒಳಕು ನಳಿಗೆಯ (ಹೋಸ್ ಪೈಪ್) ಮೂಲಕ ಅನಿಲ ಸಾಗುತ್ತದೆ. ಪಾಚಕದ ನೆಲಮಟ್ಟದಲ್ಲಿ ಓ  ಎಂಬಲ್ಲಿರುವ ತೆರೆಕಾಲುವೆಯ ಮೂಲಕ ಪಾಚಕದೊಳಗಿನ ಮಡ್ಡಿ ಹೊರ ಹರಿಯಬಲ್ಲುದು. ಇದನ್ನು ಗೊಬ್ಬರ ಸಂಗ್ರಹಣ ತೊಟ್ಟಿ ಔನಲ್ಲಿ ಸಂಗ್ರಹಿಸಿ ಅಲ್ಲಿಂದ ಬೇಕಾದಂತೆ ಒಯ್ಯುತ್ತಾರೆ.

	ಕ್ರಿಯಾ ವಿಧಾನ : ಮಡ್ಡಿ ಮಿಶ್ರಣ ತೊಟ್ಟಿ ಂಯಲ್ಲಿ ಸೆಗಣಿ ಮತ್ತು ಗಂಜಲದ ಮಡ್ಡಿಯನ್ನು (ಘನವಸ್ತು ಮತ್ತು ದ್ರವವಸ್ತು ಪ್ರಮಾಣ 1:1 ಇರುವಂತೆ) ತಯಾರಿಸಿ ಃಅಆ ಕೊಳವೆಯ ಮೂಲಕ ಪಾಚಕದ ತಳಕ್ಕೆ ಹೊಯ್ಯುಬೇಕು. ಪಾಚಕದಲ್ಲಿ ಮಡ್ಡಿಯ ಮಟ್ಟ ನೆಲಮಟ್ಟದವರೆಗೆ (ಓ) ಬರುವ ವೆರಗೂ ಇದನ್ನು ಮುಂದುವರಿಸಬೇಕು. ಆಗ, ಈಉ ಚಡಿಯ ಮೇಲೆ ವಿರಮಿಸುತ್ತಿದ್ದ ಅನಿಲಧಾರಕ ನಿಧಾನವಾಗಿ ಮಡ್ಡಿಯಲ್ಲಿ ತೇಲಲು ತೊಡಗುತ್ತದೆ. ಪಾಚಕ ಭರ್ತಿ ಆದಾಗ ಮಡ್ಡಿಯಲ್ಲಿ ಮೀಥೇನ್ ಏಕಾಣು ಜೀವಿಗಳು ರಾಸಾಯನಿಕ ಕ್ರಿಯೆಯನ್ನು ಆರಂಭಿಸುತ್ತವೆ. ಆಗ ಮಡ್ಡಿ ಮಜ್ಜಿಗೆ ಇಲ್ಲವೇ ದೋಸೆ ಹಿಟ್ಟು ಹುಳಿ ಬರುವ ರೀತಿಯಲ್ಲಿ ಹುದುಗುತ್ತದೆ. ಇದರ ಪರಿಣಾಮವಾಗಿ ಮೀಥೇನ್ ಅನಿಲ ಉದ್ಭವಿಸಿ ಮಡ್ಡಿಯ ಮೇಲು ಮಟ್ಟದಿಂದ ಗುಳ್ಳೆಗುಳ್ಳೆಯಾಗಿ ಬಿಡುಗಡೆಗೊಂಡು ಧಾರಕದ ಒಳಗೆ ಸಂಗ್ರಹಗೊಳ್ಳುವುದು. ಧಾರಕದ ಒಳಗಿನ ಒತ್ತಡ ಕ್ರಮೇಣ ಹೆಚ್ಚಿ ಅದು ಮಡ್ಡಿಯ ಮೇಲುಮಟ್ಟವನ್ನು ಕೆಳಮುಖವಾಗಿ ಅಮುಕುವುದರಿಂದ ಧಾರಕ ಏರಲಾರಂಭಿಸುತ್ತದೆ. ಧಾರಕದೊಳಗಿನ ಒತ್ತಡ ಅವಧಿಕ ಸ್ಥಿತಿಗೆ ಬಂದಾಗ ಧಾರಕ ಮಡ್ಡಿಯ ಮೇಲುಮಟ್ಟದ ಮೇಲೆ ತೇಲುತ್ತಿರುವುದು. ಇದೇ ಧಾರಕ ತುಂಬಿಕೊಂಡಿದೆ ಎನ್ನುವುದರ ಸೂಚನೆ. ಮಡ್ಡಿಯಿಂದ ಮತ್ತೆಯೂ ಬಿಡುಗಡೆ ಆಗುವ ಅನಿಲಕ್ಕೆ ಧಾರಕದೊಳಗೆ ಪ್ರವೇಶಿಸಲು ಆಗುವುದಿಲ್ಲ; ಅದು ಧಾರಕಕ್ಕೂ ಪಾಚಕದ ಅಂಚಿಗೂ ನಡುವೆ ಸುತ್ತಲೂ ಇರುವ ಸುಮಾರು 3" ಅಗಲದ ತೆರಪಿನಲ್ಲಿ ಬಿಡುಗಡೆಗೊಂಡು ವಾಯುಮಂಡಲವನ್ನು ಸೇರುತ್ತದೆ. ಆದ್ದರಿಂದ ಅನಿಲದ ಅತಿ ಇಲ್ಲವೇ ತೀವ್ರ ಉತ್ಪಾದನೆಯಿಂದ ಧಾರಕ ಆಸ್ಪೋಟಿಸುವ ಭಯ ಕಿಂಚಿತ್ತೂ ಇಲ್ಲ. ಧಾರಕ ತುಂಬಿರುವಾಗ ಐನಲ್ಲಿರುವ ತಿರುಗಣಿಯನ್ನು ಸೂಕ್ತವಾಗಿ ತಿರುಗಿಸಿದಾಗ ಅನಿಲ ಐಒ ದಿಶೆಯಲ್ಲಿ ಹರಿಯುತ್ತದೆ. ಮುಂದೆ ಅದನ್ನು ವಿಶಿಷ್ಟವಾದ ಅನಿಲ ಒಲೆಗಳ ನೆರವಿನಿಂದ ಉರುವಲಾಗಿ ಉರಿಸಿ ಅಡುಗೆ ಮುಂತಾದ ಕೆಲಸಗಳಿಗೆ ಉಪಯೋಗಿಸಬಹುದು; ಇಲ್ಲವೇ ಈ ಅನಿಲವನ್ನು ಉರುಳೆಗಳಲ್ಲಿ ಸಂಗ್ರಹಿಸಿ ಇಡಬಹುದು. ಧಾರಕದೊಲಗಿನ ಅನಿಲ ಕಡಿಮೆ ಆದಂತೆ ಒತ್ತಡ ತಗ್ಗಿ ಧಾರಕ ಇಳಿಯ ತೊಡಗುತ್ತದೆ. ಪಾಚಕದೊಳಗಿನ ಮಡ್ಡಿಯಿಂದ ಅನಿಲ ಬಿಡುಗಡೆಯಾಗುವಾಗ ಮಡ್ಡಿ ಹದ ಪಾಕವಾಗಿ ಉತ್ತಮ ಗೊಬ್ಬರವಾಗುವುದು. ಅಲ್ಲಿಂದ ಮುಂದಕ್ಕೆ ಅದು ಅನಿಲವನ್ನು ಉತ್ಪಾದಿಸಲಾರದು. ಪ್ರತಿ ದಿವಸವೂ ತೂಕವಾದ ಹೊಸ ಮಡ್ಡಿ ಪಾಚಕದ ತಳವನ್ನು (ಆ) ಪ್ರವೇಶಿಸುವಂತೆ ಉಪಯೋಗಿಸಲ್ಪಟ್ಟ ಹಗುರಾದ ಹಳೆ ಮಡ್ಡಿ ಮೇಲುಮಟ್ಟದಿಂದ (ಓ) ಹೊರಕ್ಕೆ ತಳ್ಳಲ್ಪಡುತ್ತದೆ. ಇದು ಗೊಬ್ಬರ ಸಂಗ್ರಹಣ ತೊಟ್ಟಿಯಲ್ಲಿ (ಔ) ಶೇಖರವಾಗುವುದು. ಇದನ್ನು ನೇರವಾಗಿ ಹೊತ್ತೋ ಕಾಲುವೆಗಳ ಮೂಲಕವೋ ವ್ಯವಸಾಯಕ್ಕೆ ಉಪಯೋಗಿಸಬಹುದು; ಒಣಗಿಸಿ ಒಣಗೊಬ್ಬರವಾಗಿ ಸಹ ಪರಿವರ್ತಿಸಬಹುದು.

	ಉಪಯೋಗಗಳು : ಗೊಬ್ಬರದ ಅನಿಲ ಸ್ಥಾವರ ತೀರ ಮಿತವ್ಯಯದಿಂದ ದ್ವಿವಿಧ ಸೌಕರ್ಯಗಳನ್ನು ಒದಗಿಸುವ ಒಂದು ಯಂತ್ರ ವಿನ್ಯಾಸ. ಇದರ ರಚನೆ ಮತ್ತು ಉಪಯೋಗ ತೀರ ಸರಳ. ಇಂದಿಗೂ ನಮ್ಮ ಹಳ್ಳಿ ಪಟ್ಟಣಗಳಲ್ಲಿ ಸಾಮಾನ್ಯ ಜನತೆಗೆ ಉರುವಲಿನ ಮುಖ್ಯಾಕರಗಳಲ್ಲಿ ಸೆಗಣಿ ಒಂದು. ಇದನ್ನು ಉಮಿಯೊಡನೆ ಕಲಸಿ ತಟ್ಟಿ ತಯಾರಿಸಿದ ಬೆರಣಿ ಬಹುಜನರ ಉರುವಲು. ಈ ಕ್ರಮದಿಂದ ಗೊಬ್ಬರ ಅಷ್ಟು ಪರಿಣಾಮದಲ್ಲಿ ನಿರ್ನಾಮವಾದಂತೆಯೇ. ಅನಿಲಸ್ಥಾವರವಾದರೋ ಶಾಖೋತ್ಪನ್ನಕ್ಕೆ ಬೇಕಾಗುವ ಉರುವಲನ್ನು (ಅನಿಲ) ಪೂರೈಸುವುದರ ಜೊತೆಗೆ ಸಾಂಪ್ರದಾಯಿಕ ವಿಧಾನದ ಗುಂಡಿಗೊಬ್ಬರಕ್ಕಿಂತಲೂ ಉತ್ತಮ ದರ್ಜೆಯ ಹದ ಬಂದ ಗೊಬ್ಬರವನ್ನು ಸಹ ಒದಗಿಸುತ್ತದೆ. ಈ ಗೊಬ್ಬರದಲ್ಲಿನ ಸಾರಜನಕ ಒಳಪಿಡಿ 2% ಇದು ಸಾಂಪ್ರದಾಯಿಕ ಗೊಬ್ಬರದಲ್ಲಿರುವುದಕ್ಕಿಂತ ಎರಡು ಪಟ್ಟು ಜಾಸ್ತಿ ಎಂದು ಪರೀಕ್ಷೆಯಿಂದ ಗೊತ್ತಾಗಿದೆ. ಇದರ ಜೊತೆಗೆ ಫಾಸ್ಫೇಟ್ ಮತ್ತು ಪೊಟಾಷ್ ಸಹ ಇರುವುವು. ಸ್ಥಾವರದಲ್ಲಿ ಸೆಗಣಿ ಮುಂತಾದವನ್ನು ಬಳಸಿದಾಗ ಯಾವ ವಿಧವಾದ ದುರ್ವಾಸನೆಯೂ ಪಸರಿಸುವುದಿಲ್ಲ. ಅಲ್ಲದೇ ಇದರಲ್ಲಿ ಉತ್ಪಾದನೆಗೊಳ್ಳುವ ಅನಿಲ ಮಸಿ ಅಥವಾ ಸೌದೆ ಹೊಗೆಯಂತೆ ವಿಷಕಾರಿ ಅಲ್ಲ. ಇದು ಕ್ಷಿಪ್ರಾಸ್ಫೋಟಕ ಅನಿಲವಲ್ಲದಿರುವುದರಿಂದ ಇದನ್ನು ನಿರ್ಭಯವಾಗಿ ಬಳಸಬಹುದು.

	ಒಂದು ಸಿಂಧೀ ಹಸು ಅಥವಾ ಎತ್ತು ದಿವಸವೊಂದಕ್ಕೆ ಸುಮಾರು 20 ಪೌಂಡುಗಳಷ್ಟು ಸೆಗಣಿ ಹಾಕುವುದೆಂದೂ ಇದರಿಂದ 10 ಘ.ಅ. ಗಳಷ್ಟು ಅನಿಲವನ್ನು ಪಡೆಯಬಹುದೆಂದೂ ಗಣನೆಗಳಿಂದ ತಿಳಿದುಬಂದಿದೆ. ಐವರು ಸದಸ್ಯರಿರುವ ಒಂದು ಮಿತಕುಟುಂಬದ ದೈನಂದಿನ ಉಪಯೋಗಕ್ಕೆ ಮೂರು ಬಲವಾದ ಜಾನುವಾರುಗಳು ಇಲ್ಲವೇ ಐದು ಸಾಧಾರಣ ಗಾತ್ರದ ಜಾನುವಾರುಗಳು ಹಾಕುವ ಸೆಗಣಿಯಿಂದ ದೊರೆಯುವ ಅನಿಲ ಸಾಕೆಂದು ಪ್ರತ್ಯಕ್ಷ ಪ್ರಯೋಗಗಳಿಂದ ಸಿದ್ಧವಾಗಿದೆ. ಇಂಥ ಒಂದು ಸ್ಥಾವರದ ನಿರ್ಮಾಣ ಇಂದಿನ (1973) ದರಗಳಲ್ಲಿ ಸುಮಾರು ರೂ. 2,000 ಆಗಬಹುದು. ಒಮ್ಮೆಗೆ ಇದನ್ನು ರಚಿಸಿತೋ ಮತ್ತೆ ದಿನವಹಿ ಮಡ್ಡಿಯನ್ನು ಪೂರೈಸುವುದು ಮಾತ್ರ ಉಳಿದ ಕೆಲಸ.				     (ಎಚ್.ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ